ಪಿ.ಇ.ಎಸ್ ವಿಶ್ವವಿದ್ಯಾಲಯದಲ್ಲಿ ಕರುನಾಡ ಕಲೆ-ಸಂಸ್ಕೃತಿಯ ಹೆಜ್ಜೆಯೊಡನೆ ತಾಂತ್ರಿಕತೆಯ ಕೊಂಡಿ ಬೆಸೆಯುವ ಹಂಬಲದ ಮನಸುಗಳಿಗೆ ಸದಾ ತೆರೆದ ಬಾಗಿಲು ನಮ್ಮೀ ‘ ಕನ್ನಡ ಕೂಟ ’. ಇಲ್ಲಿಂದ ಶುರುವಾಗಲಿ ನಮ್ಮ-ನಿಮ್ಮ ಹೊಸ ಒಡನಾಟ 💛❤️.


ಸಂಸ್ಕೃತಿ, ಏಕತೆ ಮತ್ತು ಪರಂಪರೆ
ಪಿ.ಇ.ಎಸ್ ವಿಶ್ವವಿದ್ಯಾಲಯದಲ್ಲಿನ ಕನ್ನಡದ ಮನಸ್ಸುಗಳನ್ನು ಅಭಿಮಾನದ ಬೆಸುಗೆಯಿಂದ ಬಂಧಿಸುವ ಕೊಂಡಿ ನಮ್ಮ ಕೂಟ. ಕನ್ನಡದ ಮಣಿಹಾರಕ್ಕೆ ಕೂಟ ಒಂದು ದಾರ. ಕನ್ನಡವೇ ನಮ್ಮ ಸಾರ, ಕನ್ನಡವೇ ನಮ್ಮ ವಿಚಾರ!
ಭಾವ-ಜೀವಗಳನ್ನು ಮುತ್ತಿನಂತೆ ಪೋಣಿಸುವ, ಅಭಿಮಾನವನ್ನು ಉಣಿಸುವ, ಹೃದಯಗಳನ್ನು ತಣಿಸುವ, ಮನಗಳನ್ನು ಕುಣಿಸುವ ಕಾರ್ಯಕ್ರಮಗಳ ಮೂಲಕ ನಮ್ಮ ಹೆಜ್ಜೆ ಗುರುತುಗಳನ್ನು ಮೂಡಿಸುತ್ತೇವೆ. ಕನ್ನಡದ ದೀಪ ಹಚ್ಚುವ ಬತ್ತಿಯಾಗುತ್ತೇವೆ, ಕನ್ನಡದ ಚಿತ್ರಪಟಕ್ಕೆ ಭಿತ್ತಿಯಾಗುತ್ತೇವೆ.
ಬೇರು ಗಟ್ಟಿಯಿದ್ದರೆ ಮಾತ್ರವೇ ಬೇರೆಲ್ಲವೂ ಗಟ್ಟಿಯಿರಲು ಸಾಧ್ಯ. ಮಾತೃಭಾಷೆ ಮಾತ್ರವೇ ಪ್ರತಿ ವ್ಯಕ್ತಿಗೆ ಮತ್ತು ಅಭಿವ್ಯಕ್ತಿಗೆ ಸಂಪೂರ್ಣ ಸ್ವಾತಂತ್ರ್ಯದ ಹಿತಕೊಡುತ್ತದೆ ಎಂಬುದು ನಮ್ಮ ನಂಬಿಕೆ.
“ಕನ್ನಡ ಬರೀ ಪ್ರೀತಿ ಅಲ್ಲ, ನಮ್ಮ ಬದುಕಿನ ರೀತಿ!” — ಕನ್ನಡ ಕೂಟ

ಮನಸ್ಸುಗಳ ನಡುವೆ ಭಾವಪರಾಗವನ್ನು ರವಾನಿಸುವ ದುಂಬಿ ಭಾಷೆ. ದುಂಬಿ ಸಂಪಾದಿಸಿಹ ಜೇನು ಕನ್ನಡ! ಆ ಜೇನ ಹೀರುವ ರಸಿಕರು ನಾವುಗಳು!
ಕನ್ನಡದ ಪರವಾಗಬೇಕು, ಕನ್ನಡದ ಕಾಯಕಕ್ಕೆ ಕೈ ಜೋಡಿಸುವ ಕರವಾಗಬೇಕು, ಮಾತೆಯ ಕೊರಳಲ್ಲಿನ ಸರವಾಗಬೇಕು, ಕನ್ನಡದ ಉದ್ಯಾನದಲ್ಲೊಂದು ಮರವಾಗಬೇಕು ಎಂಬುದೇ ನಮ್ಮ ಆಶಯ!
ಕರ್ನಾಟಕದ ಹಾಡು-ಕುಣಿತ, ಭವ್ಯತೆ-ನವ್ಯತೆ, ಪ್ರಕೃತಿ-ಸಂಸ್ಕೃತಿ, ಸಂಪದ-ಜಾನಪದ, ಉಡುಗೆ-ತೊಡುಗೆ, ಊಟ-ಉಪಚಾರ, ಹಬ್ಬ-ಹರಿದಿನ, ವ್ಯವಹಾರ-ಆಚರಣೆ, ರೀತಿ-ನೀತಿ-ಪ್ರೀತಿ ಹೀಗೆ ಹತ್ತು ಹಲವಾರು ಧಾತುಗಳ ನಡುವಿನ ಸೇತುವಾಗಿ ನಿಲ್ಲುವುದೇ ನಮ್ಮ ನಿಲುವು. ಇವೆಲ್ಲವನ್ನು ಸ್ವಾಗತಿಸುವ ಮತ್ತು ಸಂಭ್ರಮಿಸುವ ಸಾಂಸ್ಕೃತಿಕ ಹಾಗೂ ತಾಂತ್ರಿಕ ಕಾರ್ಯಕ್ರಮಗಳ ಮುಖಾಂತರ ನಮ್ಮತನದ ಭಾವನೆಯನ್ನು ಉದ್ದೀಪಿಸುವ ಕೆಲಸ ನಮ್ಮದು
ಭಾಷೆ ಎಂಬುದು ಪೆಟ್ಟಿಗೆಯಲ್ಲಿ ಗಾಜಿನ ಹಿಂದಿಟ್ಟು ಸಂರಕ್ಷಿಸುವ ಗ್ರಂಥ ಎನ್ನುವುದಕ್ಕಿಂತ ಅದರ ಪ್ರತಿ ಶಬ್ದವೂ ನಮ್ಮ ಸ್ವಂತ ಎನ್ನುವುದು ನಮ್ಮ ನಂಬಿಕೆ.
ನಮ್ಮ ಪಾಲಿಗೆ ಇದು ಬರೀ ಭಾಷೆಯಲ್ಲ, ನಮ್ಮ ನಾಲಿಗೆಯ ತುಡಿತ, ಎದೆಯ ಬಡಿತ, ಮನಸ್ಸಿನ ಮಿಡಿತ!
ಕನ್ನಡ ನಾಡಿನ ಸಂಸ್ಕೃತಿಯ ಬಿತ್ತರಿಸುವ ನೃತ್ಯ ಸಿರಿ, ಧೀಮಂತ ಪರಂಪರೆಗಳ ಒಡಲೊಳು ಹರಿಯುವ ನಾಟ್ಯ ಝರಿ, ಜಾನಪದ ನೃತ್ಯಗಳ ಬೆಡಗನ್ನು ಬಿಂಬಿಸುವ ನಾಟ್ಯಗರಿ!
ಬಿಂಕ–ಬಿನ್ನಾಣದೊಂದಿಗೆ ನಮ್ಮ ನಾಡಿನ ಸೊಬಗನ್ನು ಮೆರೆಸುವ ಕಲಾವೃಂದ, ವಿವಿಧ ಶೈಲಿಯ ಉಡುಪು ಧಾರಣೆಯೊಂದಿಗೆ ವೇದಿಕೆಯನ್ನು ಶೃಂಗರಿಸುವ ಕಲಾರವಿಂದ!
ಹುರುಪಿನ ಹೆಜ್ಜೆಗಳೊಂದಿಗೆ ಸಾಂಸ್ಕೃತಿಕ ಲಯವ ಬೆಸೆವ ಚೈತನ್ಯ ಲಹರಿ, ಉತ್ಸಾಹ ಭರಿತ ಭರ್ಜರಿ ಪ್ರದರ್ಶನಗಳೊಂದಿಗೆ ತನು ಮನವ ಕುಣಿಸುವ ನಾಟ್ಯಮಂಜರಿ!
ಗಾಯನದ ಇಂಪಲ್ಲಿ, ಕನ್ನಡದ ಕಂಪನ್ನು ಚೆಲ್ಲುವ ಸವಿಗಾನದಂಗಳ, ಭಾವ ಸ್ವರಗಳನುಲಿದು, ಸಾಹಿತ್ಯಮಾಧುರ್ಯವ ಮೆರೆಸುವ ಸಂಗೀತದಳ!
ನವರಸವನು ಅರಗಿಸಿಹ ಅಭಿನಯ ಚತುರರ ರಂಗಸಜ್ಜಿಕೆ, ನಟನೆಯಿಂದ ಕಲಾರಸಿಕರ ಮನವ ನಾಟುವ ಕಥಾಶರ ಬತ್ತಳಿಕೆ!